ಆಲ್ಮ್‍ಕ್ವಿಸ್ಟ್ ಕಾರ್ಲ್ ಯೂನಾಸ್ ಲೂವ್
	(1793-1866). ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಸ್ವೀಡನ್ನಿನ ಸಾಹಿತಿ. ಕಥೆ, ಕಾದಂಬರಿ, ನಾಟಕ ಹಾಗೂ ಕವನಗಳನ್ನು ಬರೆದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿದ್ದಾನೆ. ಬಾಲ್ಯದಿಂದಲೂ ಮೊರೇವಿಯನ್ ಸೋದರರು ಪ್ರತಿಪಾದಿಸಿದ ಧರ್ಮತತ್ತ್ವದ ಪ್ರಭಾವದಲ್ಲಿ ಬೆಳೆದ. ಸ್ವೀಡನ್ನಿನ ಲೊಥೇರಿಯನ್ ಸಂಪ್ರದಾಯದ ಮಠಕ್ಕೆ ಸೇರಿದ ಅನಂತರವೂ ಸ್ವೀಡನ್‍ಬಾರ್ಗ್‍ನ ಅನುಭಾವ ಸಿದ್ಧಾಂತವನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಮಾಡಿ ಅದರಂತೆ ತನ್ನ ತಾತ್ತ್ವಿಕ ದೃಷ್ಟಿಯನ್ನು ರೂಪಿಸಿಕೊಂಡ. ಆರ್ಥಿಕ ಮುಗ್ಗಟ್ಟು ಹಾಗೂ ಹಲವಾರು ತೊಂದರೆಗಳಿಗೆ ಸಿಕ್ಕಿದ ಇವನ ಜೀವನ ತಳಮಳದಿಂದ ತುಂಬಿತ್ತು. ಸರ್ಕಾರಿ ಅಧಿಕಾರಿಯಾಗಿ, ರೈತನಾಗಿ, ಆಧ್ಯಾಪಕವಾಗಿ, ಪಾದ್ರಿಯಾಗಿ, ಪ್ರಗತಿಶೀಲ ಪತ್ರಿಕೋದ್ಯಮಿಯಾಗಿ-ಹತ್ತಾರು ರೀತಿಯ ಉದ್ಯಮಗಳಲ್ಲಿ ಕೆಲಸಮಾಡಿದ. ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ಬರೆದ ತನ್ನ ಕಾದಂಬರಿಗಳಲ್ಲಿ ವ್ಯಕ್ತಿಸಹಜವಾದ, ವಿಚಿತ್ರ ಸಂಕೀರ್ಣ ವಿಚಾರಗಳನ್ನು ಪ್ರತಿಪಾದಿಸಿದ್ದಾನೆ. ಇವನ ಕಾದಂಬರಿಗಳಲ್ಲಿ ವಾಸ್ತವಿಕತೆ ಹಾಗೂ ವಿಲಕ್ಷಣ ಅಂಶಗಳನ್ನು ಕಾಣಬಹುದು. ಇವನು ತನ್ನ ಮೇರುಕೃತಿ ಟಾರ್ನ್‍ರೋಸೆನ್ಸ್ ಬೊಕ್ ಎಂಬ 14 ಸಂಪುಟಗಳನ್ನೊಳಗೊಂಡ ಪುಸ್ತಕವನ್ನು ಬರೆಯಲುಪಕ್ರಮಿಸಿದುದು 1832ರಲ್ಲಿ. ಬೇರೆ ಬೇರೆ ಕಾಲದಲ್ಲಿ ಬರೆದ ಐತಿಹಾಸಿಕ ಕಾದಂಬರಿಗಳು, ಸಣ್ಣ ಕಥೆಗಳು, ರಮ್ಯ ಕಥನ ಕವನಗಳು, ನಾಟಕಗಳು, ಭಾವಗೀತೆಗಳು-ಮುಂತಾದುವು ಈ ಬೃಹತ್ ಸಂಪುಟಗಳಲ್ಲಿ ಸೇರಿವೆ. ನೀಳ್ಗತೆಗಳನ್ನು ಬರೆಯುವುದರಲ್ಲಿ ಇವನದು ಅಸಾಮಾನ್ಯ ಪ್ರತಿಭೆ. 1839ರಲ್ಲಿ ಬರೆದ ಡೆಟ್‍ಗಾರ್ ಅನ್ ಎಂಬ ಅತ್ಯುತ್ತಮ ಕಥೆಯಲ್ಲಿ ಈತ ತನ್ನ ಸಮಕಾಲೀನ ಸಮಾಜದ ಚಿತ್ರಣ ನೀಡಿದ್ದಾನೆ. ವಿವಾಹ ಸಮಸ್ಯೆಯನ್ನು ಕುರಿತ ಸಾಂಪ್ರದಾಯಿಕದೃಷ್ಟಿಯನ್ನು ಅಲ್ಲಗಳೆಯುವ ಈ ನೀಳ್ಗತೆ ಬಹುದೊಡ್ಡ ವಿವಾದವೆಬ್ಬಿಸಿತು. ಲೇವಾದೇವಿ ವ್ಯಾಪಾರಿಯೊಬ್ಬನನ್ನು ವಿಷಹಾಕಿ ಕೊಂದನೆಂಬ ಆಪಾದನೆಗೆ ಸಿಕ್ಕಿ ಈತ 1851ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಓಡಿಹೋದ. ಇವನ ಮೇಲಿನ ಗುಮಾನಿಯಲ್ಲಿ ತಥ್ಯಾಂಶ ಸ್ವಲ್ಪ ಇದೆಯೆಂಬ ವಿಷಯ ಅನಂತರ ಖಚಿತವಾಯಿತು ಅಲ್ಲಿನ ಟೆಕ್ಸಾಸ್ ಪ್ರಾಂತ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಇವನ ಬಳಿ ಇದ್ದುವೆಂದು ಹೇಳಲಾದ ಹಲವು ಅತ್ಯಮೂಲ ಹಸ್ತಪ್ರತಿಗಳನ್ನು ದರೋಡೆಗಾರರು ಅಪಹರಿಸಿದರು. ಅಧ್ಯಕ್ಷ ಲಿಂಕನ್ನನಿಗೆ ದೂರಿತ್ತರೂ ಅವು ಪತ್ತೆಯಾಗಲಿಲ್ಲ. ಅಷ್ಟು ಹೊತ್ತಿಗೆ ಆಗಲೇ ಪ್ರಕಟವಾಗಿದ್ದ ರಮ್ಯ ಕಾದಂಬರಿಗಳಿಂದ ಇವನ ಕೀರ್ತಿ ಅಪಾರವಾಗಿ ಬೆಳೆದಿದ್ದರೂ ರಮ್ಯ ಕಥೆಯಂತಿರುವ ಇವನ ರೋಮಾಂಚಕಾರಿ ಜೀವನವೇ ಈತನಿಗೆ ಎಲ್ಲದಕ್ಕಿಂತ ಮಿಗಿಲಾದ ಖ್ಯಾತಿ ದೊರಕಿಸಿತು. ಹಲವಾರು ಸಲ ನಾನಾ ಅಪರಾಧಗಳ ಆಪಾದನೆಗೆ ಸಿಕ್ಕಿಕೊಂಡರೂ ಅವುಗಳಿಂದ ತಪ್ಪಿಸಿಕೊಂಡು ತಿರುಗಿದ ಇವನ ಸ್ವಾರಸ್ಯಮಯವಾದ ಜೀವನ ಕಥೆಯನ್ನು ಇಂದಿಗೂ ಸ್ವೀಡನ್ನಿನ ಜನ ಸ್ಮರಿಸಿಕೊಳ್ಳುತ್ತಾರೆ. 

(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ